ಪತ್ರಕರ್ತರು ಆತ್ಮವಿಮರ್ಶೆ ಮಾಡಿಕೊಂಡು ಕೆಲಸ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ..!

ಅಭಿವ್ಯಕ್ತ ಸ್ವಾತಂತ್ರ್ಯ ಇಲ್ಲದಿದ್ದರೆ ಪ್ರಜಾಪ್ರಭುತ್ವ ಯಶಸ್ವಿಯಾಗುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ..!

ನಗರದ ಪ್ರೆಸ್‍ಕ್ಲಬ್‍ನಲ್ಲಿ ಪತ್ರಿಕಾ ದಿನಾಚರಣೆ ಅಂಗವಾಗಿ ಆಯೋಜಿಸಲಾಗಿದ್ದ ಪತ್ರಕರ್ತರ ಸಾಮಾಜಿಕ ಜವಾಬ್ದಾರಿ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಪತ್ರಿಕೋದ್ಯಮ ಸಮಾಜದ 4ನೇ ಅಂಗ ಎಂದು ಭಾವಿಸಲಾಗಿದೆ..!

ಇತರ ಅಂಗಗಳಷ್ಟೇ ಸಮಾನ ಹೊಣೆಗಾರಿಕೆ ಪತ್ರಕರ್ತರಿಗೂ ಇದೆ. ಹೀಗಾಗಿ ಪ್ರತಿಯೊಬ್ಬರೂ ಆತ್ಮ ವಿಮರ್ಶೆ ಮಾಡಿಕೊಂಡು ಕೆಲಸ ಮಾಡಬೇಕೆಂದರು..!

ಪತ್ರಕರ್ತರು ತಮ್ಮ ಸೇವಾವಯಲ್ಲಿ ನಡೆದುಕೊಂಡ ರೀತಿಯನ್ನು ಸಿಂಹಾವಲೋಕನ ಮಾಡಿಕೊಳ್ಳಬೇಕು. ನಡವಳಿಕೆ ತೃಪ್ತಿದಾಯಕವಾಗಿದ್ದರೆ ಸಂತೋಷ. ಇಲ್ಲವಾದರೆ, ಆತ್ಮಾವಲೋಕನ ಮಾಡಿಕೊಳ್ಳಿ. ಹಿಂದೆ ಪತ್ರಕರ್ತರು ಸತ್ಯವನ್ನು ಹುಡುಕುತ್ತಿದ್ದರು. ಈಗಿನ ಪರಿಸ್ಥಿತಿಯಲ್ಲಿ ಏನಾಗುತ್ತಿದೆ ಎಂಬುದನ್ನು ನೀವೇ ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು..!

ವಿರೋಧಪಕ್ಷಗಳು ಪಂಚಖಾತ್ರಿ ಯೋಜನೆಗಳ ಬಗ್ಗೆ ಟೀಕೆ ಮಾಡುತ್ತವೆ. ಅವರಿಗೆ ಬೇರೆ ಕೆಲಸ ಇಲ್ಲ. ಆದರೆ ಪತ್ರಕರ್ತರು ವಾಸ್ತವಾಂಶಗಳನ್ನು ಪರಿಗಣಿಸಬೇಕು. ಈ ಯೋಜನೆಗಳಿಗೆ ವರ್ಷಕ್ಕೆ 52 ಸಾವಿರ ಕೋಟಿ ರೂ. ಅಗತ್ಯ ಇದೆ. ಪ್ರಸಕ್ತ ಸಾಲಿನಲ್ಲಿ ಬೇಕಾಗಿರುವ 35 ಸಾವಿರ ಕೋಟಿ ರೂ.ಗಳನ್ನು ಕಾಯ್ದಿರಿಸಿದ್ದೇನೆ. ಪಂಚಖಾತ್ರಿಗಳಿಗೆ ಯಾವುದೇ ಷರತ್ತುಗಳನ್ನು ಹಾಕದೆ ಜಾರಿ ಮಾಡಲಾಗಿದೆ. ಅನಗತ್ಯವಾಗಿ ವದಂತಿಗಳನ್ನು ಹರಡಬಾರದು ಎಂದು ತಿಳಿಸಿದರು..!

ಅನ್ನಭಾಗ್ಯ ಯೋಜನೆಯನ್ನು ಜಾರಿಗೊಳಿಸಿದಾಗ ಜನ ಸೋಮಾರಿಗಳಾಗುತ್ತಾರೆ ಎಂಬ ಟೀಕೆಗಳು ಕೇಳಿಬಂದಿವೆ. ಹಸಿದವರಿಗೆ ಹೊಟ್ಟೆ ತುಂಬಾ ಊಟ ದೊರಕುವಂತೆ ಮಾಡುವುದು ತಪ್ಪೇ. ಟೀಕೆ ಮಾಡುವವರ ಧೋರಣೆ ಹೇಗಿದೆ ಎಂದರೆ ಜನ ಹಸಿದುಕೊಂಡಿದ್ದರೂ ಪರವಾಗಿಲ್ಲ. ಅಕ್ಕಿ ನೀಡಬೇಡಿ ಎಂದು ಹೇಳುವಂತಿದೆ ಎಂದರು..!

ಬಸವಣ್ಣ ಅವರ ಕಾಯಕ-ದಾಸೋಹವನ್ನು ತಮ್ಮ ಸರ್ಕಾರ ಪಾಲನೆ ಮಾಡುತ್ತಿದೆ. ಕಾಯಕ ಮಾಡುವ ಶ್ರಮಜೀವಿಗಳು ಇಷ್ಟು ದಿನ ಉತ್ಪಾದನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಕುಳಿತುಂಡು ಸೋಮಾರಿಗಳಾಗಿದ್ದವರು ಒಂದಷ್ಟು ದಿನ ಮೈ ಮುರಿದು ದುಡಿಯಲಿ. ಶ್ರಮಿಜೀವಿಗಳು ಸ್ವಲ್ಪ ದಿನ ವಿಶ್ರಾಂತಿ ಪಡೆದುಕೊಳ್ಳಲಿ ಎಂದು ಈ ಮೊದಲು ತಿರುಗೇಟು ನೀಡಿದ್ದನ್ನು ಸ್ಮರಿಸಿಕೊಂಡರು..!

ಜಾಗತಿಕ ಮೂಲ ಆದಾಯ ಪರಿಕಲ್ಪನೆಯಡಿ ಪಂಚಖಾತ್ರಿಗಳನ್ನು ಜಾರಿಗೊಳಿಸಲಾಗಿದೆ. ಶಕ್ತಿ ಯೋಜನೆಗೆ ವಾರ್ಷಿಕ 4 ಸಾವಿರ ಕೋಟಿ ರೂ.ಗಳು ವೆಚ್ಚವಾಗುತ್ತಿದೆ. ಉಚಿತ ಪ್ರಯಾಣದಿಂದ ಮಹಿಳೆಯರು ದೇವಸ್ಥಾನಗಳಿಗೆ ತೆರಳುತ್ತಿದ್ದಾರೆ. ಬೀದಿ ಬದಿ ಹಾಗೂ ಚಿಲ್ಲರೆ ವ್ಯಾಪಾರಿಗಳ ಆದಾಯ ವೃದ್ಧಿಯಾಗಿದೆ ಎಂದರು.
ಪಂಚಖಾತ್ರಿ ಯೋಜನೆಗಳಿಂದ ಜನರ ಬಳಿ ಹಣಕಾಸಿನ ವಹಿವಾಟು ಹೆಚ್ಚಾಗುತ್ತದೆ. ಖರೀದಿ ಸಾಮರ್ಥ್ಯ ವೃದ್ಧಿಯಾಗಿ ಜಿಡಿಪಿ ಬೆಳವಣಿಗೆಯಾಗುತ್ತದೆ ಎಂದು ಹೇಳಿದರು..!

ಪತ್ರಕರ್ತರು, ಬಡವರು, ದನಿ ಇಲ್ಲದವರ ಪರವಾಗಿ ಕೆಲಸ ಮಾಡಬೇಕು. ಐತಿಹಾಸಿಕವಾದ ತಪ್ಪುಗಳಿಂದ ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆ ಹೆಚ್ಚಾಗಿದೆ. ಅದರ ನಿವಾರಣೆಗೆ ಬದ್ಧವಾಗಿರಬೇಕು ಎಂದರು..!

ಹಿರಿಯ ಪತ್ರಕರ್ತರಾದ ಪಿ.ರಾಮಯ್ಯ, ಆರ್.ಪೂರ್ಣಿಮಾ, ಡಿ.ಉಮಾಪತಿ, ವಾರ್ತಾ ಮತ್ತು ಜನಸಂಪರ್ಕ ಇಲಾಖೆಯ ಆಯುಕ್ತ ಹೇಮಂತ್ ನಿಂಬಾಳ್ಕರ್, ಪ್ರೆಸ್‍ಕ್ಲಬ್ ಅಧ್ಯಕ್ಷ ಶ್ರೀಧರ್, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರ್, ಮುಖ್ಯಮಂತ್ರಿಯವರ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರನ್ನು ಸನ್ಮಾನಿಸಲಾಯಿತು..!

ಕೆ.ಶಿವು. ಲಕ್ಕಣ್ಣವರ

Leave a Reply

Your email address will not be published. Required fields are marked *