ಯಶವಂತಪುರದಲ್ಲಿ ಮುಂಬೈ ಮಾದರಿಯ ಬೃಹತ್ ಗಣೇಶನ ಅದ್ದೂರಿ ಮೆರವಣಿಗೆ

ಬೆಂಗಳೂರು : ರಾಜರಾಜೇಶ್ವರಿ ನಗರ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯ ಯಶವಂತಪುರದ ಮಾಡಲ್ ಕಾಲೋನಿ 1ನೇ ಮುಖ್ಯರಸ್ತೆಯ ‘ಬಿ’ ಕ್ರಾಸ್ ನಲ್ಲಿ ಕಳೆದ ವರ್ಷ ಬೆಳ್ಳಿ ಹಬ್ಬವನ್ನು ಆಚರಿಸಿಕೊಂಡ ಶ್ರೀ ಗಂಧ ಅಸೋಸಿಯೇಷನ್ ಈ ಬಾರಿಯ 26 ನೇ ವರ್ಷದ ಶ್ರೀ ವಿನಾಯಕ ವಾರ್ಷಿಕೋತ್ಸವದ ಪ್ರಯುಕ್ತ 18 ಅಡಿಗಳ ಎತ್ತರ (3ಅಡಿ ಪೀಠ ಸೇರಿ) 7 ಅಡಿ ಅಗಲದ ಗಣ ನಾಯಕ ಶ್ರೀ ವೀರ ವಿನಾಯಕ ಮೂರ್ತಿಯನ್ನು, ಸುಮಾರು 3 ಅಡಿ ಎತ್ತರದ ಜಗನ್ಮಾತೆ ಶ್ರೀ ಗೌರಿ ದೇವಿಯನ್ನು ಸೆಪ್ಟೆಂಬರ್ 19ರಂದು ಪ್ರತಿಷ್ಠಾಪಿಸಿಸಿ, ಮೂರನೇ ದಿನವಾದ ಗುರುವಾರದಂದು ಮಾತೆ ಶ್ರೀ ಗೌರಿಯನ್ನು ದೀಪಾಲಂಕೃತ ರಥದಲ್ಲಿ ಹಾಗೂ ಪುತ್ರ ಶ್ರೀ ಗಣೇಶ ದೇವನನ್ನು ವಿಶಿಷ್ಟವಾಗಿ ಫೋರ್ಕ್ಲಿಫ್ಟರ್ ವಾಹನದಲ್ಲಿ ಮೆರವಣಿಗೆಯ ವ್ಯವಸ್ಥೆ ಮಾಡಿ, ಯಶವಂತಪುರದ ಸುತ್ತಮುತ್ತಲಿನ ಪ್ರಮುಖ ರಸ್ತೆಗಳಲ್ಲಿ ಕೇರಳದ ಕಾಳಿವೇಶ ಕುಣಿತ, ತಮಟೆ ವಾದ್ಯ ಹಾಗೂ ಬಾಣಬಿರುಸುಗಳೊಡನೆ ಸುಮಾರು ಆರೇಳು ಕಿಲೋಮೀಟರ್ ದೂರ ಮೆರವಣಿಗೆಯಲ್ಲಿ ಸಾಗಿ, ಅಲ್ಲಲ್ಲಿ ವಿಗ್ರಹವನ್ನು ಫೋರ್ಕ್ಲಿಫ್ಟರ್ ಯಂತ್ರದ ಬಳಕೆಯಿಂದ ಭೂಮಿಯಿಂದ ಏಲೆಂಟು ಅಡಿ ಎತ್ತರಕ್ಕೆ ಮೇಲಕ್ಕೆ ಎತ್ತಿ ಮುಂಬೈ ಮಾದರಿಯಲ್ಲಿ ದಾರಿ ಉದ್ದಕ್ಕೂ ಭಕ್ತಾದಿಗಳಿಂದ ಹಣ್ಣು ಕಾಯಿ ಪೂಜೆಗಳನ್ನು ನೆರವೇರಿಸಿಕೊಳ್ಳುತ್ತಾ ಸಾಗಿದ ಗಣಪತಿ ದೇವರನ್ನು, ಜೆ.ಪಿ. ಪಾರ್ಕ್ ಅಂಗಳದಲ್ಲಿನ ಕಲ್ಯಾಣಿಯಲ್ಲಿ ವಿಸರ್ಜನೆ ಕಾರ್ಯವನ್ನು ನೆರವೇರಿಸಲ್ಪಟ್ಟಿತು.

ಈ ಸಂದರ್ಭದಲ್ಲಿ ಮಾತನಾಡಿದ ಅಸೋಸಿಯೇಷನ್ನಿನ ಅಧ್ಯಕ್ಷರಾದ ಸಂದೇಶ್, 26 ವರ್ಷಗಳ ಹಿಂದೆ ತಮ್ಮ ಹಿರಿಯರು ಆರಂಭಿಸಿದ ಈ ಕಾರ್ಯವನ್ನು ಶ್ರದ್ಧಾ ಭಕ್ತಿಯಿಂದ ತಾವುಗಳು ಮುಂದುವರಿಸಿಕೊಂಡು ಹೋಗುತ್ತಿದ್ದು, ಜಾತಿ ಮತ ಭೇದವಿಲ್ಲದೆ ಹಿಂದೂಗಳು, ಮುಸಲ್ಮಾನರು, ಕ್ರೈಸ್ತರು, ಜೈನರು, ಬೌದ್ಧರು ಎಲ್ಲರೂ ಒಗ್ಗೂಡಿ ಸಾಮರಸ್ಯದಿಂದ ಭಾವೈಕ್ಯತೆಯಿಂದ ಆಚರಿಸಿಕೊಂಡು ಬರುತ್ತಿರುವ ಇವರುಗಳು… ವಿಭಿನ್ನ ವೃತ್ತಿಗಳ, ವ್ಯಾಪಾರ ವಹಿವಾಟು, ಸೇವಾ ವೃತ್ತಿಗಳಲ್ಲಿ ತೊಡಗಿದ್ದು ಒಂದು ನೂರಕ್ಕೂ ಹೆಚ್ಚು ಸದಸ್ಯರನ್ನು ಹೊಂದಿರುವ ಈ ಬಳಗದಲ್ಲಿ, ಪ್ರಸ್ತುತ ಬಹಳ ಜನ ಸದಸ್ಯರು ಈ ಸ್ಥಳದಲ್ಲಿ ಈಗ ನಿವಾಸಿಸದಿದ್ದರೂ ಸಹ, ಪ್ರತಿ ವರ್ಷ ಮೂರು ದಿನಗಳ ಈ ಕಾರ್ಯಕ್ರಮಕ್ಕಾಗಿ ತಮ್ಮ ಕುಟುಂಬದ ಎಲ್ಲ ಸದಸ್ಯರೊಡಗೂಡಿ ಒಟ್ಟಾಗಿ ಸೇರಿ ಮೂರು ದಿನಗಳ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳುವುದನ್ನು ತಪ್ಪಿಸುವುದಿಲ್ಲ ಎಂದರು.

ಉಪಾಧ್ಯಕ್ಷ ಕರಣ್ ಮಾತನಾಡುತ್ತಾ, ಈ ಮಹೋತ್ಸವದ ವೇಳೆ ಸಾರ್ವಜನಿಕರಿಗೆ ರಂಗೋಲಿ ಸ್ಪರ್ಧೆ, ಅನ್ನಸಂತರ್ಪಣೆ ಹಾಗೂ ಶಾಲಾ ಮಕ್ಕಳಿಗೆ ಉಚಿತವಾಗಿ ಪುಸ್ತಕ ಹಾಗೂ ಲೇಖನ ಸಾಮಗ್ರಿಗಳನ್ನು ಸಹ ವಿತರಿಸಲಾಯಿತು ಎಂಬ ಮಾಹಿತಿ ನೀಡಿ, ವಿನಾಯಕ ಮಹೋತ್ಸವದ ರೀತಿಯಲ್ಲಿಯೇ, ಪ್ರತಿ ವರ್ಷ ಆಗಸ್ಟ್ 15ರಂದು ನಮ್ಮ ಭಾರತ ದೇಶದ ಸ್ವಾತಂತ್ರೋತ್ಸವ ಹಾಗೂ ಪ್ರತಿವರ್ಷ ನವೆಂಬರ್ ನಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಿಕೊಂಡು ಬರುತ್ತಿದ್ದು, ಕರ್ನಾಟಕ ರತ್ನ ಪುನೀತ್ ರಾಜಕುಮಾರ್ ಅವರ ಸವಿನೆನಪಿನಲ್ಲಿ ಪ್ರತಿ ನವೆಂಬರ್ ಒಂದರಂದು ವಿಶೇಷವಾಗಿ ರಾಜ್ಯೋತ್ಸವವನ್ನು ಆಚರಿಸುವ ಮೂಲಕ ನಾಡು ನುಡಿಗೆ ಗೌರವವನ್ನು ಸಲ್ಲಿಸುತ್ತಾ ಬರಲಾಗುತ್ತಿದೆ ಎಂದರು. ಅಕ್ಬರ್, ಪ್ರಜ್ವಲ್, ಶಿವು ಹಾಗೂ ಇನ್ನೂ ಅನೇಕ ಗೆಳೆಯರು ಹಾಗೂ ಎಲ್ಲ ಸದಸ್ಯರು ಸಕ್ರಿಯವಾಗಿ ಪಾಲ್ಗೊಂಡು ಈ ಕಾರ್ಯಕ್ರಮದ ಯಶಸ್ಸಿಗಾಗಿ ಶ್ರಮಿಸಿರುತ್ತಾರೆ.

Leave a Reply

Your email address will not be published. Required fields are marked *