ನರ್ಸಿಂಗ್ ಇಂದಿನ ಆರೋಗ್ಯ ವ್ಯವಸ್ಥೆಯ ಬೆನ್ನೆಲುಬು: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್


ಬೆಂಗಳೂರು 30.09.2023: 
ಇಂದಿನ ಯುಗದಲ್ಲಿ, ಆರೋಗ್ಯ ಸೇವೆಗಳಲ್ಲಿ ದಾದಿಯರ ಕೊಡುಗೆ ಅಪಾರವಾಗಿದೆ. ನಿಜವಾದ ಅರ್ಥದಲ್ಲಿ ಹೇಳಬೇಕಾದರೆ, ದಾದಿಯರು ಮಾನವೀಯತೆಯ ನಿಜವಾದ ಸೇವಕರು ಎಂದು ಕರ್ನಾಟಕದ ಗೌರವಾನ್ವಿತ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಹೇಳಿದರು.

ರಾಜಭವನದಲ್ಲಿ ಆಯೋಜಿಸಲಾಗಿದ್ದ ಫ್ಲಾರೆನ್ಸ್ ನೈಟಿಂಗೇಲ್ ಪ್ರಶಸ್ತಿ ನೀಡಿ ಗೌರವಿಸಲ್ಪಟ್ಟ ದಾದಿಯರ ಗೌರವಾರ್ಥ ಕಾರ್ಯಕ್ರಮ ಮತ್ತು ಸ್ಮರಣಿಕೆ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಆರೋಗ್ಯವು ದೇವರು ನೀಡಿದ ದೊಡ್ಡ ಸಂಪತ್ತು. ಆರೋಗ್ಯಕರ ಮನಸ್ಸು ಮತ್ತು ಮೆದುಳು ಆರೋಗ್ಯಕರ ದೇಹದಲ್ಲಿ ವಾಸಿಸುತ್ತವೆ. ಮತ್ತು ಆರೋಗ್ಯ ಸೇವೆಯು ಮಾನವ ಮತ್ತು ದೈವಿಕ ಸೇವೆಯಾಗಿದೆ. ವೈದ್ಯರು ರೋಗಿಗೆ ಸೂಕ್ತ ಔಷಧಿಗಳನ್ನು ಸೂಚಿಸುತ್ತಾರೆ. ಆದರೆ ರೋಗಿಗೆ ಸಮಯಕ್ಕೆ ಸರಿಯಾಗಿ ಔಷಧಗಳನ್ನು ನೀಡಿ ಸರಿಯಾದ ಕ್ರಮ ಅನುಸರಿಸಿ ಆರೈಕೆ ಮಾಡುವ ಮಹತ್ವದ ಕೆಲಸವನ್ನು ಶುಶ್ರೂಕರು ಮಾಡುತ್ತಾರೆ. ರೋಗಿಯೊಂದಿಗೆ ಹೆಚ್ಚು ಸಮಯ ಕಳೆಯುವವರು ಶುಶ್ರೂಕರು. ಧೈರ್ಯ ಕಳೆದುಕೊಂಡಿರುವ ರೋಗಿಯಲ್ಲಿ ಭರವಸೆಯನನ್ನು ತುಂಬುವವರು ಶುಶ್ರೂಕರು.  ನಮ್ಮ ಆರೋಗ್ಯ ವ್ಯವಸ್ಥೆಯಲ್ಲಿ ವೈದ್ಯರು ಪ್ರಮುಖ ಪಾತ್ರವನ್ನು ವಹಿಸಿದ್ದರೆ, ದಾದಿಯರು ಸಹ ಹೆಗಲಿಗೆ ಹೆಗಲು ಕೊಟ್ಟು ಆರೋಗ್ಯ ಸೇವೆಗಳಿಗೆ ಪ್ರಮುಖ ಕೊಡುಗೆಗಳನ್ನು ನೀಡುತ್ತಿದ್ದಾರೆ ಎಂದು ಶ್ಲಾಘಿಸಿದರು.

ಆರೋಗ್ಯ ಜಾಗೃತಿಯಿಂದಾಗಿ, ಆರೋಗ್ಯ ಸೇವೆಗಳಲ್ಲಿ ಸುಧಾರಣೆ ಮತ್ತು ಈ ವಲಯದಲ್ಲಿ ಉದ್ಯೋಗಾವಕಾಶಗಳು ಹಿಂದೆಂದಿಗಿಂತಲೂ ಹೆಚ್ಚು ಲಭ್ಯವಾಗುತ್ತಿವೆ. ಆರೋಗ್ಯ ಕ್ಷೇತ್ರದಲ್ಲಿ ನರ್ಸಿಂಗ್ ಅತ್ಯುತ್ತಮ ವೃತ್ತಿಯಾಗಿದೆ. ಮತ್ತು ಆರೋಗ್ಯ ಕ್ಷೇತ್ರದ ಸುಗಮ ಕಾರ್ಯನಿರ್ವಹಣೆಯಲ್ಲಿ ದಾದಿಯರು ಪ್ರಮುಖ ಪಾತ್ರ ವಹಿಸುತ್ತಾರೆ. ಭಾರತದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲಿಯೂ ಆರೋಗ್ಯ ಕ್ಷೇತ್ರದಲ್ಲಿ ಪರಿಣಿತ ಮತ್ತು ತರಬೇತಿ ಪಡೆದ ದಾದಿಯರ ಅವಶ್ಯಕತೆ ಬಹಳಷ್ಟಿದೆ ಎಂದು ಹೇಳಿದರು.

ಕೊರೋನಾ ಸಾಂಕ್ರಾಮಿಕ ಸಮಯದಲ್ಲಿ ಶುಶ್ರೂಕರ ಕೊಡುಗೆ ಅಪಾರ. ಅವರ ದಣಿವರಿಯದ ಪ್ರಯತ್ನಗಳು ಮತ್ತು ಅಚಲವಾದ ಬದ್ಧತೆಗೆ, ನಿಸ್ವಾರ್ಥ ಸೇವೆಗಾಗಿ ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ ಹಾಗೂ ಆಂಗ್ಲೋ ಇಂಡಿಯನ್ ಯೂನಿಟಿ ಸೆಂಟರ್, ಕರ್ನಾಟಕ ಸರ್ಕಾರದೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡುತ್ತಿದೆ, ಫ್ಲಾರೆನ್ಸ್ ನೈಟಿಂಗೇಲ್ ನರ್ಸ್ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಆಯೋಜಿಸುತ್ತಿದೆ. ಇದಕ್ಕಾಗಿ ನಾನು ಆಂಗ್ಲೋ ಇಂಡಿಯನ್ ಯೂನಿಟಿ ಸೆಂಟರ್‌ನ ಎಲ್ಲಾ ಅಧಿಕಾರಿಗಳನ್ನು ಅಭಿನಂದಿಸುತ್ತೇನೆ ಎಂದರು.

ಕಾರ್ಯಕ್ರಮದಲ್ಲಿ ನೆರೆದಿದ್ದ ವಿವಿಧ ಜಿಲ್ಲೆಗಳ ಶುಶ್ರೂಕರು ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಮನವಿ ಮಾಡಿದರು. ಈ ಕುರಿತು ಪ್ರತಿಕ್ರಯಿಸಿದ ರಾಜ್ಯಪಾಲರು, ಲಿಖಿತ ರೂಪದಲ್ಲಿ ಮನವಿಯನ್ನು ಸಲ್ಲಿಸುವಂತೆ ಸೂಚಿಸಿ, ಮನವಿಗಳ ಕುರಿತು ಸರ್ಕಾರದಲ್ಲಿ ಚರ್ಚಿಸಿ, ಕಾರ್ಯರೂಪಕ್ಕೆ ತರುವ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ಎಂ.ಕೆ. ರಮೇಶ್, ಕರ್ನಾಟಕ ರಾಜ್ಯ ನರ್ಸಿಂಗ್ ಕೌನ್ಸಿಲ್ ರಿಜಿಸ್ಟ್ರಾರ್ ಮಲ್ಲು , ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಯ ನರ್ಸಿಂಗ್ ಸೂಪರಿಂಟೆಂಡೆಂಟ್ ವೀಣಾ ಎಸ್. ಪರಮಣವರ್, ಫ್ಲಾರೆನ್ಸ್ ನೈಟಿಂಗೇಲ್ ಪ್ರಶಸ್ತಿ ಸಮಿತಿಯ ಅಧ್ಯಕ್ಷ ಇವಾನ್ ನಿಗ್ಲಿ ಸೇರಿದಂತೆ ಮುಂತಾದ ಗಣ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *