ಗಾಂಧಿ ಜಯಂತಿ: ಕಾವೇರಿ ನೀರಿಗಾಗಿ ಹೋರಾಟ, ಮೌನ ಧರಣಿ

ಬೆಂಗಳೂರು: ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಅವೈಜ್ಞಾನಿಕ ತೀರ್ಪು ಖಂಡಿಸಿ ಹೋರಾಟ ಮುಂದುವರಿಸಿರುವ ಆಮ್‌ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಡಾ.ಮುಖ್ಯಮಂತ್ರಿ ಚಂದ್ರು ಅವರು ರೈತ ಮುಖಂಡ ಕುರುಬೂರು ಶಾಂತಕುಮಾರ್‌ ಅವರ ಸಹಯೋಗದೊಂದಿಗೆ ಗಾಂಧಿ ಜಯಂತಿಯ ಅಂಗವಾಗಿ ನಗರದ ಫ್ರೀಡಂ ಪಾರ್ಕ್‌ನಲ್ಲಿ ಮೌನ ಧರಣಿ ನಡೆಸಿದರು.

ಕರ್ನಾಟಕ ಜಲ ಸಂರಕ್ಷಣಾ ಸಮಿತಿಯ ವತಿಯಿಂದ ಸೆಪ್ಟೆಂಬರ್‌ 26ರಂದು ನಡೆದ ಬೆಂಗಳೂರು ಬಂದ್‌ ಯಶಸ್ವಿಯಾದ ಬಳಿಕ ಸೆಪ್ಟೆಂಬರ್‌ 29ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಹಕ್ಕೋತ್ತಾಯಗಳನ್ನು ಮಾಡಿದ್ದರು. ಆದರೆ ಇದುವರೆಗೆ ರಾಜ್ಯ ಸರ್ಕಾರದಿಂದ ಈ ಬಗ್ಗೆ ಯಾವುದೇ ಸ್ಪಷ್ಟ ನಿರ್ಧಾರ ಕೈಗೊಂಡಿಲ್ಲದ ಕಾರಣ ಸೋಮವಾರ ಗಾಂಧಿ ಜಯಂತಿ ಆಚರಣೆ ಸಂದರ್ಭ ಮಹಾತ್ಮ ಗಾಂಧಿಜೀಯವರನ್ನು ಸ್ಮರಿಸುತ್ತ ಮೌನ ಧರಣಿ ನಡೆಸಿದರು. ರಾಜ್ಯ ಸರ್ಕಾರ ತ್ವರಿತವಾಗಿ ತಮಿಳುನಾಡಿಗೆ ಹರಿಯುವ ನೀರನ್ನು ಸ್ಥಗಿತಗೊಳಿಸುವ ನಿರ್ಧಾರಕ್ಕೆ ಬರಬೇಕು ಎಂದು ಎಚ್ಚರಿಸಿದರು.

ಪಕ್ಷದ ರಾಜ್ಯ ಉಪಾಧ್ಯಕ್ಷ ಮೋಹನ್‌ ದಾಸರಿ ಸೇರಿದಂತೆ ಅನೇಕ ಮುಖಂಡರು, ಹೋರಾಟಗಾರರು, ಕಾರ್ಯಕರ್ತರು ನಮ್ಮ ನೀರು ನಮ್ಮ ಹಕ್ಕು ಎಂಬ ಘೋಷವಾಕ್ಯದ ಫಲಕಗಳನ್ನು ಪ್ರದರ್ಶಿಸಿದರು.

ಮಂಡಿಸಲಾಗಿರುವ ಮೂರು ಪ್ರಮುಖ ಹಕ್ಕೊತ್ತಾಯಗಳು
1) ಕೂಡಲೇ ತಮಿಳುನಾಡಿಗೆ ಹರಿಸುತ್ತಿರುವ ನೀರು ನಿಲ್ಲಿಸಬೇಕು.
2) ವಿಶೇಷ ವಿಧಾನ ಮಂಡಲದ ಅಧಿವೇಶನ ಕರೆದು ಸಂಕಷ್ಟ ಸೂತ್ರ ಜಾರಿ ಆಗುವ ತನಕ ನೀರು ಬಿಡುವುದಿಲ್ಲ ಎನ್ನುವ ನಿರ್ಣಯ ಕೈಗೊಳ್ಳಬೇಕು
3) ಮಳೆ ಹೆಚ್ಚು ಬಂದಾಗ ನೀರು ಸಂಗ್ರಹಿಸಿಕೊಳ್ಳಲು ಮೇಕೆದಾಟು ನಿರ್ಮಾಣ ತಕ್ಷಣ ಕಾರ್ಯಾ ಆರಂಭ ಮಾಡಬೇಕು.

Leave a Reply

Your email address will not be published. Required fields are marked *