
ಬೆಂಗಳೂರು: ನಗರದ ಮೈಸೂರು ರಸ್ತೆಯಲ್ಲಿ ಇರುವ ಫಾರೆಸ್ಟ್ ಲೇಔಟ್‌ನಲ್ಲಿ ಸುಸಜ್ಜಿತ ರಸ್ತೆಗಳನ್ನು ನಿರ್ಮಿಸಿಕೊಡುವುದಾಗಿ ಸಂಸದ ಡಿ.ಕೆ.ಸುರೇಶ್ ಭರವಸೆ ನೀಡಿದ್ದಾರೆ.
ಗುರುವಾರ ತಮ್ಮ ಲೋಕಸಭಾ ಕ್ಷೇತ್ರದ ಬೆಂಗಳೂರು ನಗರದ ಬಡಾವಣೆಗಳಿಗೆ ಖುದ್ದು ಭೇಟಿ ನೀಡಿ ಸಮಸ್ಯೆಗಳನ್ನು ಪರಿಶೀಲಿಸಿದ ಸಂದರ್ಭದಲ್ಲಿ ಜ್ಞಾನಭಾರತಿ ಬಡಾವಣೆಗೆ ಹೊಂದಿಕೊಂಡಂತೆ ಇರುವ ಫಾರೆಸ್ಟ್ ಲೇಔಟ್‌ಗೂ ಭೇಟಿ ನೀಡಿದ್ದ ಅವರು, ಲೇಔಟ್‌ನಲ್ಲಿನ ಮೂಲಭೂತ ಸೌಕರ್ಯಗಳ ಕೊರತೆ ಬಗ್ಗೆ ಸ್ಥಳೀಯರಿಂದ ಮಾಹಿತಿ ಪಡೆದುಕೊಂಡರು.
ಫಾರೆಸ್ಟ್ ಲೇಔಟ್ ನಿವಾಸಿಗಳ ಸಂಘದ ಮುಖ್ಯಸ್ಥರೊಂದಿಗೆ ಮಾತುಕತೆ ನಡೆಸಿದ ಅವರು, ಉದ್ಯಾನವನಗಳ ಅಭಿವೃದ್ಧಿಯನ್ನು ಬಿಬಿಎಂಪಿಯಿಂದ ನಡೆಸಬೇಕಿದ್ದು, ರಸ್ತೆಗಳ ನಿರ್ಮಾಣಕ್ಕೆ ಸಂಸದರ ನಿಧಿಯಿಂದ ಅನುದಾನ ಕೊಡಿಸಲಾಗುವುದು ಎಂದು ಭರವಸೆ ನೀಡಿದರು.
ಮೈಸೂರು ರಸ್ತೆಯ ಬೆಂಗಳೂರು ವಿಶ್ವ ವಿದ್ಯಾನಿಲಯಕ್ಕೆ ಹೊಂದಿಕೊಂಡಿರುವ ಫಾರೆಸ್ಟ್ ಲೇಔಟ್ ಸಾಕಷ್ಟು ಹಳೆಯ ಬಡಾವಣೆ ಆಗಿದ್ದರೂ ಸಹ ಮೂಲಸೌಕರ್ಯಗಳಿಲ್ಲದೆ ಬಸವಳಿದಿದೆ. ಉದ್ಯಾನವನಗಳ ಅಭಿವೃದ್ಧಿ ಜತೆಗೆ ರಸ್ತೆಗಳ ನಿರ್ಮಾಣ ಆಗಬೇಕಿದೆ. ಈ ಮೂಲ ಸೌರ್ಕಯ ಕೊರತೆ ಪರಿಣಾಮ ರಾಜಧಾನಿ ನಗರಿಯಲ್ಲಿದ್ದರೂ ಈ ಬಡಾವಣೆ ಈವರೆಗೆ ಅಭಿವೃದ್ಧಿಯಿಂದ ದೂರವೇ ಉಳಿದಿದೆ. ಈ ಹಿನ್ನೆಲೆಯಲ್ಲಿ ಬಡಾವಣೆಗೆ ಭೇಟಿ ನೀಡಿ ಖುದ್ದು ಪರಿಶೀಲನೆ ನಡೆಸಿದ ಸಂಸದರು ಅಭಿವೃದ್ಧಿಯ ಭರವಸೆ ನೀಡಿದ್ದಾರೆ.
ಸಂಸದರ ಭೇಟಿ ವೇಳೆ ಬೆಂಗಳೂರು ಪಶ್ಚಿಮ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಹನುಮಂತರಾಯಪ್ಪ ಸೇರಿದಂತೆ ಬಡಾವಣೆಗಳ ನಿವಾಸಿಗಳ ಸಂಘದ ಪದಾಧಿಕಾರಿಗಳು ಮತ್ತು ನಿವಾಸಿಗಳು ಉಪಸ್ಥಿತರಿದ್ದರು.