ಅನ್ಯ ಭಾಷಿಕರಿಗೆ ಕನ್ನಡ ಕಲಿಸಲು “ಬಿಂದಾಸ್ ಆಗಿ ಕನ್ನಡ ಮಾತಾಡಿ” ವೇದಿಕೆ ಅಸ್ಥಿತ್ವಕ್ಕೆ
ಪ್ರತಿ ಭಾನುವಾರ ಮಧ್ಯಾಹ್ನ 12 ರಿಂದ 1 ರವರೆಗೆ ಗೂಗಲ್ ಮೀಟ್ ಚಾನಲ್‌ಗಳ ಮುಖಾಂತರ ಬಿಂದಾಸ್ ಆಗಿ ಕನ್ನಡ ಮಾತಾಡಿ ವೇದಿಕೆ ಕಾರ್ಯನಿರ್ವಹಣೆ
ಬೆಂಗಳೂರು, ಅ, 31; ಕರ್ನಾಟಕ ಎಂದು ನಾಮಕರಣವಾಗಿ 50 ವರ್ಷ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ವರ್ಷಪೂರ್ತಿ ಕನ್ನಡ ಕಾರ್ಯಕ್ರಮಗಳು ನಡೆಯುತ್ತಿರುವ ಬೆನ್ನಲ್ಲೇ “ಬಿಂದಾಸ್ ಆಗಿ ಕನ್ನಡ ಮಾತಾಡಿ” ವೇದಿಕೆ ಅನ್ಯ ಭಾಷಿಕರಿಗೆ ಕನ್ನಡ ಕಲಿಸಲು ಮುಂದಾಗಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾರ್ಯಕ್ರಮ ಸಂಯೋಜಕ ಜಗದೀಶ ಕೊಟ್ಟೂರ ಶಟ್ಟರ, “ಬಿಂದಾಸ್ ಆಗಿ ಕನ್ನಡ ಮಾತಾಡಿ ಎನ್ನುವುದು ಅನ್ಯಭಾಷಿಕರು ತಮ್ಮ ಕನ್ನಡ ಮಾತನಾಡುವ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವ ಒಂದು ವಿನೂತನ ವೇದಿಕೆಯಾಗಿದೆ. ಸರ್ಜಾಪುರದ ಆರ್ ಡಬ್ಲೂ ಎನಿಂದ ಕನ್ನಡ ಆನೈನ್ ಟ್ಯೂಷನ್ಸ್ ಹಮ್ಮಿಕೊಳ್ಳಲಾಗಿದೆ. ಕನ್ನಡ ಮಾತನಾಡುವ ಸಾಮರ್ಥ್ಯ ವೃದ್ಧಿಸಿಕೊಳ್ಳಲು ಇಚ್ಚಿಸುವ ಅನ್ಯಭಾಷಿಕರಿಗಾಗಿ ಇದನ್ನು ವಿನ್ಯಾಸಗೊಳಿಸಲಾಗಿದೆ. ಯಾವುದೇ ನಿರ್ಬಂಧವಿಲ್ಲದೇ ಕನ್ನಡವನ್ನು ಆತ್ಮವಿಶ್ವಾಸದಿಂದ ಮಾತನಾಡಲು ಈ ವೇದಿಕೆ ಅವಕಾಶ ಒದಗಿಸುತ್ತದೆ” ಎಂದರು.

“ಏನಾದರೂ ಮಾತಾಡಿ!, “ಹೆಂಗಾದ್ರೂ ಮಾತಾಡಿ, “ತಪ್ಪಾದರೂ ಮಾತಾಡಿ, “ಒಟ್ಟಾರೆ ಕನ್ನಡ ಮಾತಾಡಿ ಎಂಬುದು ಇದರ ಉದ್ದೇಶವಾಗಿದೆ. ಭಾಗವಹಿಸುವವರಿಗೆ ಆತ್ಮವಿಶ್ವಾಸದಿಂದ ಕನ್ನಡ ಮಾತನಾಡಲು ಪ್ರೋತ್ಸಾಹಿಸುವುದು. ಕಲಿಕೆಯ ಪ್ರಕ್ರಿಯೆಯ ಭಾಗವಾಗಿ ಅನ್ಯಭಾಷಿಕರು ಕನ್ನಡ ಮಾತನಾಡುವಾಗ ಆಗುವ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಈ ವೇದಿಕೆ ಅವಕಾಶ ಕಲ್ಪಿಸುತ್ತದೆ ಎಂದರು.
ಇದಕ್ಕಾಗಿ ವೈವಿಧ್ಯಮಯ ಭಾಷಾ ಹಿನ್ನೆಲೆಗಳನ್ನು ಪೂರೈಸಲು ಕನ್ನಡ-ಇಂಗಿಷ್, ಕನ್ನಡ-ಹಿಂದಿ, ಕನ್ನಡ- ತೆಲುಗು, ಕನ್ನಡ-ತಮಿಳು ಮತ್ತು ಕನ್ನಡ-ಮಲಯಾಳಂ ಗೂಗಲ್ ಮೀಟ್ ಚಾನಲ್‌ಗಳನ್ನು ನೀಡುತ್ತಿದೆ. ಕನ್ನಡ ಮತ್ತು ಆಯಾ ಚಾನೆಲ್ ಭಾಷೆಗಳಲ್ಲಿ ನಿರರ್ಗಳವಾಗಿ ಅನುಭವಿ ಚರ್ಚಾನಿರ್ವಾಹಕರು ಮಾರ್ಗದರ್ಶನ ನೀಡಲಿದ್ದಾರೆ. ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯೋತ್ಸವದ ಶುಭ ದಿನದಂದು 1ನೇ ನವೆಂಬರ್ 2023 ರಂದು ಪ್ರಾರಂಭಿಸಲು ನಿರ್ಧರಿಸಲಾಗಿದೆ. ಪ್ರತಿ ಭಾನುವಾರ ಮಧ್ಯಾಹ್ನ 12:00 ರಿಂದ 1:00 ರವರೆಗೆ ಗೂಗಲ್ ಮೀಟ್ ಚಾನಲ್‌ಗಳ ಮುಖಾಂತರ ಬಿಂದಾಸ್ ಆಗಿ ಕನ್ನಡ ಮಾತಾಡಿ ವೇದಿಕೆ ಕಾರ್ಯನಿರ್ವಹಿಸಲಿದೆ ಎಂದರು.
ಅಸಕ್ತ ವ್ಯಕ್ತಿಗಳು ಕನ್ನಡ ಆನ್‌ಲೈನ್ ಟ್ಯೂಷನ್ ವೆಬ್ ನಲ್ಲಿರುವ “ಬಿಂದಾಸ್ ಆಗಿ ಕನ್ನಡ ಮಾತಾಡಿ ವಿಭಾಗವನ್ನು ಪ್ರವೇಶಿಸಿ ಅಲ್ಲಿರುವ ಗೂಗಲ್ ಮೀಟ್ ಚಾನಲ್ಲಿನ ಕೊಂಡಿಯನ್ನು ಒತ್ತಿ ಬಿಂದಾಸಾಗಿ ಕನ್ನಡ ಮಾತಾಡಿ ಕಾರ್ಯಕ್ರಮದ ವೇದಿಕೆಯಲ್ಲಿ ಭಾಗವಹಿಸಬಹುದು. ಅಥವಾ ಈ ಲಿಂಕ್ ಅನ್ನು ಒತ್ತುವ ಮೂಲಕ ಭಾಗವಹಿಸಬಹುದು. https://bit.ly/BindaasKannada_Mathadi