ರಾಜ್ಯದಲ್ಲಿ ಬಿಜೆಪಿಗೆ ಭದ್ರ ಬುನಾದಿ ಹಾಕಿದ ಅನಂತಕುಮಾರ್- ಬಿ.ವೈ.ವಿಜಯೇಂದ್ರ
ಬೆಂಗಳೂರು: ಬಿಜೆಪಿಗೆ ಭದ್ರ ಬುನಾದಿ ಹಾಕಿ ರಾಜ್ಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ಕೇಂದ್ರದ ಹಿಂದಿನ ಸಚಿವ ಅನಂತಕುಮಾರ್ ಅವರ ಪರಿಶ್ರಮವನ್ನು ನಾವ್ಯಾರೂ ಮರೆಯಲು ಸಾಧ್ಯವಿಲ್ಲ ಎಂದು ಬಿಜೆಪಿಯ ನೂತನ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ತಿಳಿಸಿದರು.
ಮುತ್ಸದ್ಧಿ ಶ್ರೀ ಅನಂತಕುಮಾರರ ಪುಣ್ಯತಿಥಿಯ ಸ್ಮರಣಾರ್ಥ ಅದಮ್ಯ ಚೇತನ ಹಾಗೂ ಅನಂತಕುಮಾರ್ Prathistana ಸಹಯೋಗದಲ್ಲಿ ʻಅನಂತ ಸ್ಮೃತಿ ನಡಿಗೆʼ ಶೀರ್ಷಿಕೆಯಡಿ ಪಂಜಿನ ಮೆರವಣಿಗೆ ಆಯೋಜಿಸಲಾಗಿದ್ದು, ಅದನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಲಾಲ್ ಬಾಗ್ ಪಶ್ಚಿಮ ದ್ವಾರದಿಂದ ಆರಂಭವಾದ ಈ ನಡಿಗೆಗೆ ಚಾಲನೆ ಕೊಟ್ಟು ಮಾತನಾಡಿದ ಅವರು, ಅತ್ಯಂತ ಕಿರಿಯ ವಯಸ್ಸಿನಲ್ಲೇ ದೇಶಭಕ್ತಿಯ ಭಾವನೆಯೊಂದಿಗೆ ದೇಶದ ಅನೇಕ ಯುವಜನರಲ್ಲಿ ದೇಶಭಕ್ತಿಯ ಭಾವವನ್ನು ಬಿತ್ತಿದವರು ಅನಂತಕುಮಾರ್. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ಬಿಜೆಪಿಗೆ ಅನಂತಕುಮಾರ್ ಅವರ ಸೇವೆ ಯಾವತ್ತೂ ಮರೆಯಲಸಾಧ್ಯ. ಅನಂತಕುಮಾರ್, ಯಡಿಯೂರಪ್ಪ ಅವರ ಸಂಘಟನಾ ಚಾತುರ್ಯ, ಪಕ್ಷಕ್ಕೆ ನೀಡಿದ ಕೊಡುಗೆಗಳನ್ನು ಮರೆಯುವುದು ಅಸಾಧ್ಯ ಎಂದು ನುಡಿದರು.
ಯಡಿಯೂರಪ್ಪ, ಅನಂತಕುಮಾರರ ನಡುವಿನ ಆತ್ಮೀಯತೆ, ಸಂಘಟನೆಗಾಗಿ ಅವರು ಪಡುತ್ತಿದ್ದ ಶ್ರಮವನ್ನು ಮೆಲುಕು ಹಾಕಿದ ಅವರು, ಅಂಥ ರಾಜಕಾರಣಿಗಳು ಈಗ ವಿರಳ ಎಂದು ತಿಳಿಸಿದರು. ಹಗಲಿರುಳೆನ್ನದೆ ಪಕ್ಷದ ಸಂಘಟನೆಗಾಗಿ ಯಡಿಯೂರಪ್ಪ ಮತ್ತು ಅನಂತಕುಮಾರ್ ಅವರು ದುಡಿದಿದ್ದರು ಎಂದು ವಿವರಿಸಿದರು.

ತೇಜಸ್ವಿನಿ ಅನಂತಕುಮಾರ್ ಅವರು ಕೂಡ ಸುಮ್ಮನೆ ಕುಳಿತವರಲ್ಲ. ಅನಂತಕುಮಾರ್ ಅವರ ಕುಟುಂಬದಿಂದ ಬಂದರೂ ತೇಜಸ್ವಿನಿಯವರು ಸಾಮಾನ್ಯರಲ್ಲಿ ಸಾಮಾನ್ಯರಂತೆ ಅದಮ್ಯ ಚೇತನದ ಮೂಲಕ ಲಕ್ಷಾಂತರ ಮಕ್ಕಳಿಗೆ ಎರಡು ತುತ್ತು ಅನ್ನ ಕೊಡುವ ಪುಣ್ಯ ಕಾರ್ಯದಲ್ಲಿ ನಿರತರಾಗಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದರು. ಇವತ್ತು ನಾನು, ತೇಜಸ್ವಿ ಸೂರ್ಯ ಮತ್ತು ಅನೇಕ ಶಾಸಕರು ಇಲ್ಲಿ ನಿಂತು ಮಾತನಾಡಲು ಅನಂತಕುಮಾರರ ಪ್ರೇರಣೆಯೇ ಅದಕ್ಕೆ ಕಾರಣ ಎಂದು ಹೆಮ್ಮೆಯಿಂದ ತಿಳಿಸುವುದಾಗಿ ಹೇಳಿದರು.
ರಾಜಕಾರಣಿಗಳು ತಮ್ಮ ಲಾಭಕ್ಕಾಗಿ ಕೆಲಸ ಮಾಡುತ್ತಾರೆ. ಆದರೆ, ತೇಜಸ್ವಿನಿ ಅವರ ಸಮಾಜಮುಖಿ ಸೇವಾಕಾರ್ಯ ಅಭಿನಂದನೀಯ ಎಂದು ತಿಳಿಸಿದರು. ಅನಂತಕುಮಾರ್ ಅವರು ನಮ್ಮ ಮುಂದೆ ಇಲ್ಲದಿದ್ದರೂ ಅವರ ಮಾರ್ಗದರ್ಶನ, ಪ್ರೇರಣೆಯೊಂದಿಗೆ ನಾವು ನಮ್ಮಲ್ಲಿ ದೇಶಭಕ್ತಿ ಜೊತೆಗೆ ಸಮಾಜಸೇವೆ ಮಾಡುತ್ತಿದ್ದೇವೆ ಎಂದು ಅವರು ತಿಳಿಸಿದರು. ಇದೇವೇಳೆ ಅವರು ದೀಪಾವಳಿ ಶುಭಾಶಯ ಕೋರಿದರು.
ಅದಮ್ಯ ಚೇತನದ ಅಧ್ಯಕ್ಷ ಕೃಷ್ಣ ಭಟ್, ಶ್ರೀಮತಿ ತೇಜಸ್ವಿನಿ ಅನಂತಕುಮಾರ್, ಸಂಸದ ಮತ್ತು ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ, ಮಾಜಿ ಶಾಸಕ ಗುಂಡ್ಲುಪೇಟೆ ನಿರಂಜನ್, ಶಾಸಕರಾದ ರಾಮಮೂರ್ತಿ, ರವಿ ಸುಬ್ರಹ್ಮಣ್ಯ, ಮಾಜಿ ಮೇಯರ್ ಕಟ್ಟೆ ಸುಬ್ರಹ್ಮಣ್ಯ ಅವರು ಭಾಗವಹಿಸಿದ್ದರು.