ಬಿ.ವೈ.ವಿಜಯೇಂದ್ರರಿಂದ ಅಧಿಕಾರ ಸ್ವೀಕಾರ
ಬೆಂಗಳೂರು: ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಕಾರ್ಯಕರ್ತರ ಜಯಕಾರ, ಹಿರಿಯರಿಂದ ಆಶೀರ್ವಾದ ಪಡೆದು, ಹೋಮದ ಪೂರ್ಣಾಹುತಿ ನೆರವೇರಿಸಿದ ಬಿಜೆಪಿಯ ರಾಜ್ಯಾಧ್ಯಕ್ಷರಾಗಿ ಶಾಸಕ ಬಿ.ವೈ.ವಿಜಯೇಂದ್ರ ಅವರು ಅಧಿಕಾರ ಸ್ವೀಕರಿಸಿದರು.
ನಿರ್ಗಮಿತ ಅಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಅವರು ನೂತನ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರ ಮಾಡಿದರು. ಹೋಮದ ಪೂರ್ಣಾಹುತಿಯಲ್ಲಿ ಭಾಗವಹಿಸಿದ ವಿಜಯೇಂದ್ರ ಅವರು ಇದೇವೇಳೆ ಭಾರತ ಮಾತೆ, ಜಗನ್ನಾಥ ರಾವ್ ಜೋಷಿ ಮತ್ತಿತರ ಪ್ರಮುಖರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದರು.

ಬಿಜೆಪಿ ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ನಿರ್ಗಮಿತ ಅಧ್ಯಕ್ಷ ಮತ್ತು ಸಂಸದ ನಳಿನ್‍ಕುಮಾರ್ ಕಟೀಲ್, ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಜೇಶ್ ಜಿ.ವಿ, ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ, ಮಾಜಿ ಡಿಸಿಎಂಗಳಾದ ಕೆ.ಎಸ್.ಈಶ್ವರಪ್ಪ, ಗೋವಿಂದ ಕಾರಜೋಳ, ಡಾ.ಅಶ್ವತ್ಥನಾರಾಯಣ್, ಹಿರಿಯ ನಾಯಕ ರಾಮಚಂದ್ರ ಗೌಡ, ಮಾಜಿ ಸಚಿವರು, ಮಾಜಿ ಹಾಲಿ ಶಾಸಕರು, ಜಿಲ್ಲಾಧ್ಯಕ್ಷರು, ಸಂಸದರು, ಪಕ್ಷದ ರಾಜ್ಯ-ಜಿಲ್ಲಾ ಪ್ರಮುಖರು, ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.

ರಾಜ್ಯ ಕಾರ್ಯಾಲಯಕ್ಕೆ ಆಗಮಿಸಿದ ವಿಜಯೇಂದ್ರ ಮತ್ತು ಪಕ್ಷದ ಇತರ ಪ್ರಮುಖರಿಗೆ ಸುಮಂಗಲಿಯರು ಪೂರ್ಣಕುಂಭ ಕಲಶಗಳೊಂದಿಗೆ ಸ್ವಾಗತ ಕೋರಿದರು. ಬ್ಯಾಂಡ್, ಯಕ್ಷಗಾನದ ವೇಷಗಳು, ಗೊಂಬೆಗಳ ಮೂಲಕ ಅದ್ಧೂರಿ ಸ್ವಾಗತ ಕೋರಲಾಯಿತು.