ಜೆ.ಪಿ.ಪಾರ್ಕ್‌ ಆಟದ ಮೈದಾನದಲ್ಲಿ ಬಿಹಾರ ಮೂಲದ ವಿಶ್ವಕರ್ಮ ಸಮಾಜದಿಂದ ಛತ್ ಪೂಜಾ ಕಾರ್ಯಕ್ರಮ

ಬೆಂಗಳೂರು : ತ್ರೇತಾಯುಗ ಹಾಗೂ ದ್ವಾಪರಯುಗಗಳ ಕಾಲದಿಂದಲೂ, ಹಿಂದೂಗಳ ಮಹಾಗ್ರಂಥಗಳಾದ ರಾಮಾಯಣ ಹಾಗೂ ಮಹಾಭಾರತದಲ್ಲೂ ಉಲ್ಲೇಖಗೊಂಡಿರುವ ಛತ್ ಪೂಜಾ ಆಚರಣೆಯನ್ನು ನಮ್ಮ ಭಾರತ ದೇಶದಲ್ಲಿ ಅದರಲ್ಲೂ ವಿಶೇಷವಾಗಿ ಬಿಹಾರ, ಉತ್ತರಪ್ರದೇಶ ಹಾಗೂ ರಾಜಸ್ಥಾನ ರಾಜ್ಯಗಳಲ್ಲಿ ಬಹುಮುಖ್ಯ ಹಬ್ಬಗಳಲ್ಲೊಂದಾಗಿ ಆಚರಿಸಿಕೊಂಡು ಬರಲಾಗುತ್ತಿದ್ದು, ಇದರ ಐತಿಹ್ಯವೇನೆಂದರೆ, ಸೂರ್ಯ ದೇವನ ಸಹೋದರಿಯಾದ ಛಟೀ ಮಾತಾ ದೇವಿಯ ಆರಾಧನೆಯನ್ನು ಮಹಿಳೆಯರು ಪ್ರಾಮುಖ್ಯವಾಗಿ ಆಚರಿಸುವ ಈ ಮೂರು ದಿನಗಳ ಹಬ್ಬದಾಚರಣೆಯು, ದೀಪಾವಳಿ ಮುಗಿದ ಆರನೇ ದಿನ ಸಂಪನ್ನಗೊಳ್ಳುತ್ತದೆ. ಈ ಹಬ್ಬದ ಆಚರಣೆಯ ಬಹುಮುಖ್ಯ ಸಂಪ್ರದಾಯವೆಂದರೆ ಭಗವಾನ್ ಸೂರ್ಯ ದೇವನಿಗೆ ಉದಯ ಹಾಗೂ ಅಸ್ತ ಉಭಯ ಕಾಲಗಳಲ್ಲೂ ವ್ರತಾಚರಣೆ ಮಾಡುವ ಸ್ತ್ರೀಯರು ನೀರಿನಲ್ಲಿ ನಿಂತು ಸಂಧ್ಯಾವೇಳೆ ಸೂರ್ಯ ದೇವನಿಗೆ ನೀರಿನಿಂದ ಹಾಗೂ ಸೂರ್ಯೋದಯದ ವೇಳೆ ಹಾಲಿನಿಂದ ಅರ್ಘ್ಯವನ್ನು ನೀಡಿ ತಮ್ಮ ಕುಟುಂಬ ಹಾಗೂ ಸಮಸ್ತ ಲೋಕಕ್ಕೂ ಮಂಗಳವನ್ನುಂಟು ಮಾಡಲು ಸೂರ್ಯ ದೇವನನ್ನು ಪ್ರಾರ್ಥನೆ ಮಾಡುವ ಈ ಆಚರಣೆಯಲ್ಲಿ ಸಮಸ್ತ ಹಿಂದೂ ಬಾಂಧವರು ಜಾತಿ-ಮತ, ಮೇಲು-ಕೀಳು, ಬಡವ-ಶ್ರೀಮಂತ ಎಂಬ ಬೇಧಬಾವಗಳಿಗೆ ಈ ಹಬ್ಬದ ವೃತಾಚರಣೆಯಲ್ಲಿ ಆಸ್ಪದ ನೀಡದೆ, ಹಿಂದೂ ಸಂಪ್ರದಾಯವನ್ನು ಪಾಲಿಸುವ ಸರ್ವರೂ ಒಗ್ಗೂಡಿ ಒಂದೆಡೆ ಸೇರಿ ಸಂಭ್ರಮ ಹಾಗೂ ಸಡಗರದಿಂದ ಆಚರಿಸುವ ಹಬ್ಬ ಇದಾಗಿದೆ.
ರಾಜರಾಜೇಶ್ವರಿ ನಗರ ವಿಧಾನ ಸಭಾ ಕ್ಷೇತ್ರದ ಯಶವಂತಪುರದ ಮತ್ತೀಕೆರೆಯ ಜೆ.ಪಿ.ಪಾರ್ಕ್‌ ನ ಆಟದ ಮೈದಾನದಲ್ಲಿ ನಾಲ್ಕನೇ ಬಾರಿಗೆ ಶ್ರೀ ವಿಶ್ವಕರ್ಮ ಬಿಹಾರ್ ಸಮಾಜ ಸೇವಾ ಟ್ರಸ್ಟ್ (ರಿ) ನ ವತಿಯಿಂದ ಆಯೋಜಿತ ಕಾರ್ಯಕ್ರಮವು ಜರುಗಲಿದೆ.

ನವೆಂಬರ್ 17, ಶುಕ್ರವಾರ ದಿನ ಮೊದಲುಗೊಂಡು 20 ನೇ ತಾರೀಖು ಸೋಮವಾರ ಮುಂಜಾನೆ ವರೆವಿಗೂ ಸಂಪ್ರದಾಯಾಚರಣೆಗೆ ಅಗತ್ಯವಿರುವ ವ್ಯವಸ್ಥೆ ಮಾಡಿಕೊಳ್ಳಲಾಗಿದ್ದು, ಇಲ್ಲಿ ನಿರ್ಮಿಸಲಾಗಿರುವ ತಾತ್ಕಾಲಿಕ ಮಂಟಪದಲ್ಲಿ, ನೀರಿನ ತಾತ್ಕಾಲಿಕ ಕೊಳವನ್ನು ನಿರ್ಮಿಸಿ, ವ್ರತಾಚರಣೆ ಮಾಡಲು ಅನುವು ಮಾಡಿಕೊಡಲಾಗುತ್ತಿದ್ದು, ಸುತ್ತಮುತ್ತಲಿನ ಪ್ರದೇಶಗಳಾದ ಮತ್ತೀಕೆರೆ, ಎಂ.ಎಸ್.ಆರ್.ನಗರ, ಜಾಲಹಳ್ಳಿ, ಸುಭೇದಾರ ಪಾಳ್ಯ, ಮುತ್ಯಾಲನಗರ, ಮೋಹನ್ ಕುಮಾರ ನಗರ, ಮಲ್ಲೇಶ್ವರಂ, ಸಂಜಯನಗರ ಹಾಗೂ ಇತರೆ ಭಾಗಗಳಲ್ಲಿ ವಾಸಿಸುತ್ತಿರುವ ಬಿಹಾರ ರಾಜ್ಯ ಮೂಲದ ಸುಮಾರು ನಾಲ್ಕೈದು ಸಾವಿರ ಕುಟುಂಬಗಳವರು, ತಮ್ಮ ಸಂಪ್ರದಾಯದಂತೆ ಅತಿ ಮುಖ್ಯ ವಾಗಿರುವ ಈ ಹಬ್ಬವನ್ನು ಇಲ್ಲಿ ಮುಕ್ತವಾಗಿ ಆಚರಿಸುವಂತಾಗಬೇಕೆಂದು ಅಗತ್ಯ ಕ್ರಮಗಳನ್ನು ಇಲ್ಲಿ ಏರ್ಪಡಿಸಲಾಗಿದ್ದು, ಛತ್ ಪೂಜೆಯಲ್ಲಿ ಸರ್ವರೂ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗಬೇಕೆಂದು ಸಂಘದ ಉಪಾಧ್ಯಕ್ಷ ರಾಜನ್ ಕುಮಾರ್ ಶರ್ಮಾ ಮಾಹಿತಿಯನ್ನು ನೀಡಿದರು. ಕಳೆದ ಹಲವಾರು ವರ್ಷಗಳಿಂದ ಬೆಂಗಳೂರಿನ ಈ ಭಾಗದಲ್ಲಿ ಹೆಬ್ಬಾಳ ಕೆರೆ, ಸ್ಯಾಂಕಿ ಕೆರೆಗಳಲ್ಲಿ ಆಚರಿಸುತ್ತಾ ಬಂದಿದ್ದ ಈ ಹಬ್ಬವನ್ನು ಕಳೆದ ಮೂರು ವರ್ಷಗಳಿಂದ ಹೆಚ್ಚು ಸೌಕರ್ಯಗಳನ್ನು ಹೊಂದಿರುವ ಹಾಗೂ ವಾಹನಗಳ ನಿಲುಗಡೆಗೆ ಸ್ಥಳಾವಕಾಶವಿರುವ ಜೆ.ಪಿ. ಪಾರ್ಕ್‌ನಲ್ಲಿ ಆಯೋಜಿಸಲಾಗುತ್ತಿದ್ದು, ನವೆಂಬರ್ 17 ರಿಂದ 20 ನೇ ತಾರೀಖಿನವರೆಗೂ ನಡೆಯಲಿರುವ ಛತ್ ಪೂಜಾ ವ್ರತಾಚರಣೆಯಲ್ಲಿ ಸಾರ್ವಜನಿಕರು ಸಹ ಭಾಗವಹಿಸಲು ಈ ಮೂಲಕವಾಗಿ ಶ್ರೀ ವಿಶ್ವಕರ್ಮ ಬಿಹಾರ್ ಸಮಾಜ ಸೇವಾ ಟ್ರಸ್ಟ್ (ರಿ) ನ ವತಿಯಿಂದ ಸರ್ವರಿಗೂ ಆಮಂತ್ರಣವನ್ನು ನೀಡಿದ್ದಾರೆ.

Leave a Reply

Your email address will not be published. Required fields are marked *