ಬೆಂಗಳೂರು, ಮಾ, ೧೫; ಅಲೆಮಾರಿ ಸಮುದಾಯದ ಶ್ರೇಯೋಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.
ನಗರದ ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾದ ಕರ್ನಾಟಕ ಎಸ್ಸಿ, ಎಸ್ಟಿ ಅಲೆಮಾರಿ, ವಿಮುಕ್ತ ಬುಡಕಟ್ಟು ಸಂಘಟನೆಗಳ ಒಕ್ಕೂಟದಿಂದ ಇದೇ ಮೊದಲ ಬಾರಿಗೆ ಆಯೋಜಿಸಲಾದ ಅಲೆಮಾರಿ ಸಮುದಾಯಗಳ “ರಾಜ್ಯ ಮಟ್ಟದ ಬೃಹತ್ ಜಾಗೃತಿ ಸಮಾವೇಶ”ವನ್ನು ಉದ್ಘಾಟಿಸಿ ಮಾತನಾಡಿ, ಸರ್ಕಾರ ಶೋಷಿತ ಸಮುದಾಯಗಳ ಅಭಿವೃದ್ಧಿಗೆ ಸದಾ ಶ್ರಮಿಸುತ್ತದೆ. ಸರ್ಕಾರದ ಗ್ಯಾರೆಂಟಿ ಮತ್ತು ಜನಪರ ಯೋಜನೆಗಳನ್ನು ಶೋಷಿತ ಸಮುದಾಯ ಸದ್ಭಳಕೆ ಮಾಡಿಕೊಳ್ಳಬೇಕು ಎಂದರು.
ಹೋರಾಟ ಇಲ್ಲದೇ ಇದ್ದಲ್ಲಿ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಮಹಾರಾಷ್ಟ್ರದಲ್ಲಿ ವಿಶ್ವವಿದ್ಯಾಲಯಕ್ಕೆ ಡಾ. ಅಂಬೇಡ್ಕರ್ ಅವರ ಹೆಸರಿಡಲು ಇಪ್ಪತ್ತು ವರ್ಷಗಳ ಕಾಲ ಉಗ್ರ ಹೋರಾಟ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ನೂರಾರು ಮಂದಿ ಹುತಾತ್ಮರಾದರು. ಆದರೆ ಕೊನೆಗೆ ಬಾಬಾ ಸಾಹೇಬ್ ಅಂಬೇಡ್ಕರ್ ಎಂದು ಹೆಸರಿಡುವ ಬದಲು ಮರಾಠವಾಡ ಅಂಬೇಡ್ಕರ್ ಎಂದು ಹೆಸರು ನಾಮಕರಣ ಮಾಡಿದರು. ಹೀಗಾಗಿ ಯಾವುದೇ ಸಮಾಜ ಹೊರಾಟ ಮಾಡದೇ ಇದ್ದಲ್ಲಿ ಏನನ್ನೂ ಪಡೆಯಲು ಸಾಧ್ಯವಿಲ್ಲ. ನಮ್ಮ ಸರ್ಕಾರ ನಿಮ್ಮ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುತ್ತದೆ. ನಿಮ್ಮ ಶ್ರೇಯೋಭಿವೃದ್ಧಿಗೆ ಬದ್ಧ ಎಂದು ಹೇಳಿದರು.
ಸಮಾವೇಶದಲ್ಲಿ ಅಲೆಮಾರಿಗಳಿಗೆ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕವಾಗಿ ಮುಂದುವರೆಯಲು ಜಾತಿ ಪ್ರಮಾಣ ಪತ್ರ ಸಮಸ್ಯೆ ನಿವಾರಿಸಬೇಕು. ಬಜೆಟ್ ನಲ್ಲಿ ಘೋಷಿಸಿರುವ “ಅಲೆಮಾರಿ ಆಯೋಗ”ವನ್ನೂ ಕೂಡಲೇ ಅನುಷ್ಠಾನಕ್ಕೆ ತರಬೇಕು. ಸಮಸ್ತ ಎಸ್ಸಿ/ಎಸ್ಟಿ ಹಾಗೂ ಓಬಿಸಿ ಅಲೆಮಾರಿ ಸಮುದಾಯಗಳು ಒಳಗೊಂಡಂತೆ “ಶಾಶ್ವತ ಆಯೋಗ” ರಚನೆ ಮಾಡಬೇಕು ಎಂದು ಒತ್ತಾಯಿಸಿ ನಿರ್ಣಯ ಕೈಗೊಳ್ಳಲಾಗಿದೆ.
ಅಲೆಮಾರಿ ಜನಾಂಗದ ವಸತಿ ರಹಿತರಿಗೆ ಕನಿಷ್ಠ 5-ಲಕ್ಷ ರೂ ವೆಚ್ಚದಲ್ಲಿ ಮನೆ ನಿರ್ಮಿಸಿಕೊಳ್ಳಲು ಅನುದಾನ, ಅಲೆಮಾರಿ ಜನಾಂಗದ ಶೈಕ್ಷಣಿಕ, ಸಾಂಸ್ಕೃತಿಕ, ಪಾರಂಪರಿಕ ಕಲೆಗಳನ್ನು ಉಳಿಸಿ ಬೆಳೆಸಲು ಕಲಾವಿದರ ಅಭಿವೃದ್ಧಿ ಮತ್ತು ಪೂರಕ ಚಟುವಟಿಕೆಗಳನ್ನು ಕೈಗೂಳ್ಳಲು ಹಾಗೂ ಶೈಕ್ಷಣಿಕ ಮತ್ತು ತರಬೇತಿ ಕೇಂದ್ರ ತೆರೆಯಲು ರಾಜಧಾನಿ ಬೆಂಗಳೂರು ನಗರದಲ್ಲಿ 10 ಎಕರೆ ಜಮೀನು ಮಂಜೂರು ಮಾಡಬೇಕು. ಅವಕಾಶ ವಂಚಿತ ಕಟ್ಟಕಡೆಯ ಅಲೆಮಾರಿ ಸಮುದಾಯದವರಿಗೆ ಸರ್ಕಾರದ ಯೋಜನೆ ತಲುಪಲು ಆದ್ಯತೆ ಮೇರೆಗೆ ಆರ್ಥಿಕ ಮತ್ತು ಭೌತಿಕ ಗುರಿ ಸೌಲಭ್ಯಗಳನ್ನು ನಿಗದಿಪಡಿಸಲು ನಿಯಮ ರೂಪಿಸಬೇಕು. ದೊಂಬರ, ಶಿಳ್ಳೇಕ್ಯಾತ, ಕೊರಮ, ಕೊರಚ, ಚಪ್ಪರಬಂದ್ ಹೀಗೆ ಮುಂತಾದ ಅಲೆಮಾರಿ ಸಮುದಾಯಗಳ ಹೆಸರುಗಳನ್ನು ಬೈಗುಳವಾಗಿ ಪದಪ್ರಯೋಗ ಮಾಡುತ್ತಿರುವುದನ್ನು ತಡೆಗಟ್ಟಬೇಕು ಎಂದು ನಿರ್ಣಯದ ಮೂಲಕ ಒತ್ತಾಯಿಸಲಾಗಿದೆ.
ಸಮಾವೇಶದಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್. ಜಸ್ಟೀಸ್ ನಾಗಮೋಹನ್ ದಾಸ್, ಸಂಘದ ಅಧ್ಯಕ್ಷ ಆದರ್ಶ ಯಲ್ಲಪ್ಪ, ಎಸ್ಸಿ ಎಸ್ಟಿ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಪಲ್ಲವಿ ಜಿ, ಎಸ್ ಸಿ ಎಸ್ ಟಿ ಅಲೆಮಾರಿ ವಿಮುಕ್ತ ಸಂಘಟನೆಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಬಿ ಹೆಚ್ ಮಂಜುನಾಥ್ ದಾ ಯೆತ್ಕರ್, ಉಪಾಧ್ಯಕ್ಷರಾದ ಸಿದ್ದಪ್ಪಾಜಿ ಕೆ.ಪಿ, ಲೋಹಿತಾಕ್ಷ , ರಾಘವೇಂದ್ರ ಮುಕ್ರಿ, ಜಂಟಿ ಕಾರ್ಯದರ್ಶಿ ಆನಂದ್ ಕುಮಾರ್ ಏಕಲವ್ಯ, ಖಜಾಂಚಿಗಳಾದ ಬಸವರಾಜ ನಾರಾಯಣಕರ, ವೆಂಕಟೇಶ್ ದೊರ, ಗೌರವ ಸಲಹೆಗಾರರಾದ ಅನಂತ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.