ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು ಕರ್ನಾಟಕದ ಏಕೀಕರಣ ಮತ್ತು ನಾಮಕರಣದಲ್ಲಿ ಪ್ರಮುಖ ಪಾತ್ರವಹಿಸಿದೆ. ಪರಿಷತ್ತು ಹುಟ್ಟಿದ್ದೇ ಮೊದಲ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ. ಅಲ್ಲಿಂದ ಮುಂದೆ ಪ್ರತಿ ಅಖಿಲ ಭಾರತ ಸಮ್ಮೇಳನಗಳೂ ಈ ನಿಟ್ಟಿನಲ್ಲಿ ಕನ್ನಡದ ಅಸ್ಮಿತೆಯನ್ನು ಕಾಪಾಡುವಲ್ಲಿ ಇಟ್ಟ ದಿಟ್ಟ ಹೆಜ್ಜೆಗಳೇ ಆಗಿವೆ. ಕರ್ನಾಟಕ ಏಕೀಕರಣ ಮತ್ತು ನಾಮಕರಣ ಎರಡರಲ್ಲಿಯೂ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಅಖಿಲ ಭಾರತ ಸಾಹಿತ್ಯ ಸಮ್ಮೇಳನಗಳು ಬಹಳ ಮುಖ್ಯವಾದ ಪಾತ್ರವನ್ನು ವಹಿಸಿವೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ನಾಮಕರಣದ ಸುವರ್ಣ ಸಂಭ್ರಮವನ್ನು ವರ್ಷಪೂರ್ತಿ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲು ಕನ್ನಡ ಸಾಹಿತ್ಯ ಪರಿಷತ್ತು ಕಾರ್ಯ ಪ್ರವೃತ್ತವಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿಯವರು ತಿಳಿಸಿದ್ದಾರೆ.
ಕರ್ನಾಟಕ ಎಂಬ ಹೆಸರಿನ ಸುವರ್ಣ ಸಂಭ್ರಮದ ಈ ಸಂದರ್ಭದಲ್ಲಿ ಐವತ್ತು ಮಹತ್ವದ ಪ್ರಶಸ್ತಿಗಳನ್ನು ಕನ್ನಡ ಸಾಹಿತ್ಯ ಪರಿಷತ್ತು ನೀಡಲು ತಾತ್ವಿಕವಾಗಿ ನಿರ್ಧರಿಸಿದೆ ಎಂದು ನಾಡೋಜ ಡಾ. ಮಹೇಶ ಜೋಶಿ ತಿಳಿಸಿದ್ದಾರೆ. ಕನ್ನಡ-ಕನ್ನಡಿಗ-ಕರ್ನಾಟಕ ಇವುಗಳ ಹಿರಿಮೆಗೆ ಅದರಲ್ಲಿಯೂ ಮುಖ್ಯವಾಗಿ ಕರ್ನಾಟಕದ ಏಕೀಕರಣಕ್ಕೆ ಹಾಗೂ ನಾಮಕರಣಕ್ಕೆ ದುಡಿದ ಐವತ್ತು ವ್ಯಕ್ತಿ-ಸಂಘ ಸಂಸ್ಥೆಗಳನ್ನು ಗುರುತಿಸಿ ಈ ಪುರಸ್ಕಾರವನ್ನು ನೀಡಲಾಗುವುದು. ಈ ಕುರಿತ ಆಯ್ಕೆಗೆ ಸರ್ವೊಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿಯನ್ನು ರಚಿಸಲಾಗಿದ್ದು ಪಾರದರ್ಶಕವಾಗಿ ಆಯ್ಕೆ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ. ಈ ಪ್ರಶಸ್ತಿಗಳಿಗೆ ‘ಸುವರ್ಣ ಕರ್ನಾಟಕ ಪರಿಷತ್ತಿನ ಪುರಸ್ಕಾರ’ ಎಂದು ಹೆಸರಿಡಲು ತೀರ್ಮಾನಿಸಲಾಗಿದೆ ಎಂದು ನಾಡೋಜ ಡಾ.ಮಹೇಶಜೋಶಿಯವರು ತಿಳಿಸಿದ್ದಾರೆ.
‘ಕನ್ನಡದ ಮಠ’ ಎಂದೇ ಹೆಸರಾಗಿರುವ ಭಾಲ್ಕಿಮಠದಲ್ಲಿ ಏಪ್ರಿಲ್ ನಲ್ಲಿ ನಡೆಯುವ ಜಾತ್ರೋತ್ಸವ ಸಮಾರಂಭದಲ್ಲಿ ಈ ಪ್ರಶಸ್ತಿಗಳನ್ನು ಕನ್ನಡೋತ್ಸವದೊಂದಿಗೆ ನಡೆಸಿ ಈ ಪ್ರಶಸ್ತಿಗಳನ್ನು ವಿತರಣೆ ಮಾಡಲಾಗುವುದು. ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಭಾಲ್ಕಿ ಮಠವಿದ್ದ ಕಾಲದಿಂದಲೂ ಅದರ ಕನ್ನಡ ಸೇವೆ ನಡೆದು ಕೊಂಡು ಬಂದಿದೆ. ನಿಜಾಮರ ಕಾಲದಲ್ಲಿ ಹೊರಗೆ ಉರ್ದು ಬೋರ್ಡ್ ಹಾಕಿ ಒಳಗೆ ಕನ್ನಡ ಪಾಠವನ್ನು ಮಾಡಿದ ಹೆಗ್ಗಳಿಕೆ ಡಾ. ಚನ್ನಬಸವೇಶ್ವರ ಪಟ್ಟದೇವರು ಅವರದ್ದು. ಈಗ ನಾಡೋಜ ಡಾ.ಬಸವಲಿಂಗ ಪಟ್ಟದವರೇ ಅದನ್ನು ಸಮರ್ಥವಾಗಿ ಮುಂದುವರೆಸಿಕೊಂಡು ಬರುತ್ತಿದ್ದಾರೆ. ಇಲ್ಲಿ ಕನ್ನಡಪರ ಸೇವೆ ಸಲ್ಲಿಸಿದರನ್ನು ಸನ್ಮಾನಿಸುವುದು ಪರಿಷತ್ತಿನ ಅಶಯ.
ಕನ್ನಡದ ಏಕೀಕರಣಕ್ಕೆ, ನಾಮಕರಣಕ್ಕೆ, ಮುಖ್ಯವಾಗಿ ಕನ್ನಡ-ಕರ್ನಾಟಕ-ಕನ್ನಡಿಗರ ಏಳಿಗೆಗೆ ಎಲೆಮರೆಯ ಕಾಯಂತೆ ಸೇವೆ ಸಲ್ಲಿಸಿ ಬೆಳಕಿಗೆ ಬಾರದಂತಹ ಸಾಧಕರನ್ನು ಗುರುತಿಸುವುದು ಈ ಪುರಸ್ಕಾರದ ಉದ್ದೇಶ. ಕನ್ನಡ ಸೇವೆಯನ್ನು ಸಲ್ಲಿಸಿದ ವ್ಯಕ್ತಿ-ಸಂಘಗಳೇ ನೇರವಾಗಿ ಅರ್ಜಿಯನ್ನು ಸಲ್ಲಿಸ ಬಹುದು. ಒಂದು ವೇಳೆ ತಾವು ಕನ್ನಡದ ಸೇವೆಯನ್ನು ಸಲ್ಲಿಸಿದ್ದೇವೆ, ಅದಕ್ಕಾಗಿ ಪುರಸ್ಕಾರ ಪಡೆಯುವುದು ಸಮಂಜಸವಲ್ಲ ಎಂಬ ಭಾವನೆ ಹೊಂದಿ ಅರ್ಜಿ ಸಲ್ಲಿಸಲು ಮುಜುಗರ ಪಡುವವರು ಇದ್ದರೆ. ಅಂತಹವರ ಪರವಾಗಿ ಅವರ ಸೇವೆಯನ್ನು ನಿಕಟವಾಗಿ ಬಲ್ಲ ವ್ಯಕ್ತಿಗಳು/ಸಂಘ ಸಂಸ್ಥೆಗಳೂ ಕೂಡ ಅರ್ಜಿಯನ್ನು ಸಲ್ಲಿಸ ಬಹುದು. ಅರ್ಹರಿಗೆ ಪುರಸ್ಕಾರಗಳು ದೊರಕುವುದು ಮುಖ್ಯ ಎಂದು ನಾಡೋಜ ಡಾ.ಮಹೇಶ ಜೋಶಿಯವರು ತಿಳಿಸಿದ್ದಾರೆ.
ಆಸಕ್ತ ವ್ಯಕ್ತಿಗಳು ಅಥವಾ ಸಂಸ್ಥೆ ಸ್ವವಿವರ ಎಂದರೆ ಹೆಸರು, ಹುಟ್ಟಿದ ದಿನಾಂಕ, ವಿಳಾಸ, ಮೊಬೈಲ್ ಸಂಖ್ಯೆ, ಇ ಮೇಲ್ ವಿಳಾಸ ತಮ್ಮ ಸಾಧನೆಗಳ ವಿವರ . ಅದಕ್ಕೆ ಪೂರವ ಮಾಹಿತಿ, ಶಿಫಾರಸ್ಸು ಮಾಡಿದ್ದರೆ, ಸಾಧಕರ ವಿವರಗಳ ಜೊತೆಗೆ ಶಿಫಾರಸ್ಸು ಮಾಡಿದವರು ಅವರನ್ನು ಎಷ್ಟು ವರ್ಷದಿಂದ ಬಲ್ಲರು ಎಂಬ ವಿವರ ಮೊದಲಾದ ಸೂಕ್ತ ದಾಖಲೆಗಳೊಂದಿಗೆ ಭರ್ತಿ ಮಾಡಿದ ಅರ್ಜಿಗಳನ್ನು ‘ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜ ಪೇಟೆ, ಬೆಂಗಳೂರು-18’ ಇಲ್ಲಿಗೆ ಮಾರ್ಚಿ 31., 2024ನೆಯ ದಿನಾಂಕದೊಳಗೆ ಕಳುಹಿಸ ಬೇಕು. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿಯವರು ಸಾಂಸ್ಕೃತಿಕ ಮಹತ್ವದ ಈ ಮಾಹಿತಿಯನ್ನು ಸಮಸ್ತ ಕನ್ನಡಿಗರಿಗೆ ತಲುಪಿಸಲು ನೆರವಾಗ ಬೇಕೆಂದು ಕೋರಿದ್ದಾರೆ.
ಎನ್.ಎಸ್.ಶ್ರೀಧರ ಮೂರ್ತಿ
ಸಂಚಾಲಕರು, ಪ್ರಕಟಣಾ ವಿಭಾಗ, ಕನ್ನಡ ಸಾಹಿತ್ಯ ಪರಿಷತ್ತು