ಮೈಸೂರು:ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ಎಚ್.ಎಸ್.ದೊರೆಸ್ವಾಮಿ ಅವರ ಹೆಸರಿನಲ್ಲಿ ಕೊಡಮಾಡುವ ಕೆಯುಡಬ್ಲ್ಯೂಜೆ ದತ್ತಿನಿಧಿ ಪ್ರಶಸ್ತಿಗೆ ಭಾಜನರಾಗಿದ್ದ ಹಿರಿಯ ಪತ್ರಕರ್ತ ಆರ್.ಜಯಕುಮಾರ್ ಅವರಿಗೆ ಮೈಸೂರಿನ ಅವರ ತೋಟದ ಮನೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರು ಪ್ರದಾನ ಮಾಡಿದರು.
ಈ ಸಂದರ್ಭದಲ್ಲಿ ಶಿವಾನಂದ ತಗಡೂರು ಅವರು ಮಾತನಾಡಿ, ಚಿತ್ರದುರ್ಗದಲ್ಲಿ ನಡೆದ ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ ಜಯಕುಮಾರ್ ಅವರು ಅನಾರೋಗ್ಯದ ಕಾರಣ ಬರಲು ಸಾಧ್ಯವಾಗಿರಲಿಲ್ಲ. ಆದ್ದರಿಂದ ಇಂದು ಕೆಯುಡಬ್ಲ್ಯೂಜೆಯೇ ಅವರ ಮನೆಗೆ ಬಂದಿದ್ದು ಪ್ರಶಸ್ತಿ ಪ್ರದಾನ ಮಾಡುತ್ತಿದೆ ಎಂದು ಹೇಳಿದರು.
ಸ್ವಾತಂತ್ರ್ಯ ಹೋರಾಟಗಾರರು ಮತ್ತು ಶತಾಯುಶಿಗಳಾಗಿ ಬದುಕಿದ ಎಚ್.ಎಸ್.ದೊರೆಸ್ವಾಮಿ ಅವರು ಕೆಯುಡಬ್ಲ್ಯೂಜೆ ಅಧ್ಯಕ್ಷರಾಗಿ ಸಂಘವನ್ನು ಮುನ್ನೆಡೆಸಿದವರು. ಅವರ ಹೆಸರಿನಲ್ಲಿ ದತ್ತಿನಿಧಿ ಪ್ರಶಸ್ತಿ ನೀಡಲಾಗುತ್ತಿದ್ದು ಈ ಬಾರಿ ಸುಧೀರ್ಘ ಅವಧಿಗೆ ಕ್ರಿಯಾಶೀಲವಾಗಿ ಕೆಲಸ ಮಾಡಿದ ಜಯಕುಮಾರ್ ಅವರು ಭಾಜನರಾಗಿದ್ದಾರೆ ಎಂದರು.
ದೊರೆಸ್ವಾಮಿ ಅವರ ಸಮಾಜಮುಖಿ ವಿಚಾರಧಾರೆಯಲ್ಲಿ ಮೂರೂವರೆ ದಶಕಗಳ ಕಾಲ ಸಂಯುಕ್ತ ಕರ್ನಾಟಕ, ವಿಜಯ ಕರ್ನಾಟಕ ಸೇರಿದಂತೆ ಹಲವು ಪತ್ರಿಕೆಯಲ್ಲಿ ಪತ್ರಕರ್ತರಾಗಿದ್ದ ಜಯಕುಮಾರ್ ಅವರಿಗೆ ಈ ಪ್ರಶಸ್ತಿ ಪ್ರದಾನ ಮಾಡುತ್ತಿರುವುದು ಸಂಘಕ್ಕೆ ಅಭಿಮಾನದ ಸಂಗತಿ ಎಂದರು.
ಈ ಸಂದರ್ಭದಲ್ಲಿ ಅವರ ಪತ್ನಿ ಲೀಲಾ ಸಂಪಿಗೆ, ಡಾ.ಪ್ರವೀಣ್, ಮೈಸೂರು ಜಿಲ್ಲಾ ಸಂಘದ ಪ್ರಭುರಾಜು, ಸಿ.ಕೆ.ಮಹೇಂದ್ರ, ಎಸ್.ಟಿ. ರವಿಕುಮಾರ್, ಎಂ.ಸುಬ್ರಹ್ಮಣ್ಯ, ರಾಘವೇಂದ್ರ, ಧರ್ಮಪುರ ನಾರಾಯಣ, ಹಿರಿಯ ಪತ್ರಕರ್ತರುಗಳಾದ ಆರಾಧ್ಯ, ಲೋಕೇಶ್ ಕಾಯರ್ಗ, ಚಿನ್ನಸ್ವಾಮಿ ವಡ್ಡಗೆರೆ, ಓಂಕಾರ್, ಮಹಾದೇವ ನಾಯಕ್ ಮತ್ತಿತರರು ಮಾತನಾಡಿ ಜಯಕುಮಾರ್ ಅವರ ಹೋರಾಟದ ಹಾದಿ ಮತ್ತು ಪತ್ರಕರ್ತರಾಗಿ ಸಲ್ಲಿಸಿದ ಸೇವೆ ಸ್ಮರಿಸಿದರು. ಆದಷ್ಟು ಬೇಗ ಗುಣಮುಖರಾಗಿ ಬರುವಂತೆ ಹಾರೈಸಿದರು.