ಅಡ್ಡದಾರಿ ಮೂಲಕ ಹಣ ಸಂಗ್ರಹ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು: ಎಸ್. ಸುರೇಶ್ ಕುಮಾರ್

ವಾರ್ತಾಜಾಲ
By -
0

ಬೆಂಗಳೂರು: ಬಿಡಿಎ ಮೂಲಕ ಚುನಾವಣೆಗೆ ಅಡ್ಡದಾರಿಯಿಂದ ಹಣ ಸಂಗ್ರಹಿಸುವ ಶಂಕೆಯಿದ್ದು, ಇದರ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ಕೊಡಲಾಗಿದೆ ಎಂದು ಶಾಸಕ ಎಸ್. ಸುರೇಶ್ ಕುಮಾರ್ ಅವರು ತಿಳಿಸಿದರು.

ಬಿಜೆಪಿ ಚುನಾವಣಾ ಮಾಧ್ಯಮ ಕೇಂದ್ರ ಹೋಟೆಲ್ ಜಿ.ಎಂ. ರಿಜಾಯ್ಸ್‍ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿ ಇರುವ ಸಮಯದಲ್ಲಿ ಬಿಡಿಎ, ಶಿವರಾಮ ಕಾರಂತ ಬಡಾವಣೆಯಲ್ಲಿನ ಗುತ್ತಿಗೆದಾರರ ಪಾವತಿಗಾಗಿ 1 ಸಾವಿರ ಕೋಟಿಯಿಂದ 2 ಸಾವಿರ ಕೋಟಿ ಬೇಕಿದ್ದು, ಅದಕ್ಕಾಗಿ ನಾಡಪ್ರಭು ಕೆಂಪೇಗೌಡ ಬಡಾವಣೆಯ ಮೂಲ ನಿವೇಶನಗಳನ್ನು ಬ್ಯಾಂಕಿಗೆ ಅಡಮಾನ ಇಟ್ಟು ಹಣ ಪಡೆಯಲು ಹೊರಟಿದ್ದಾರೆ. ನೀತಿ ಸಂಹಿತೆ ಇರುವಾಗ ಇಷ್ಟೊಂದು ಭಾರಿ ಮೊತ್ತ ಪಡೆಯುವುದು ಅನುಮಾನಕ್ಕೆ ಆಸ್ಪದವಾಗಿದೆ. ಗುತ್ತಿಗೆದಾರರಿಗೆ ಈಗಲೇ ಹಣ ಕೊಡಬೇಕೇ? ಅದರ ಹಿಂದೆ ಏನಿದೆ ಎಂದು ಪ್ರಶ್ನಿಸಿದರು.




ರಾಜ್ಯದ ಆಡಳಿತರೂಢ ಕಾಂಗ್ರೆಸ್ ಪಕ್ಷವು ಮೂಲಸೌಕರ್ಯ ಕಾಮಗಾರಿಗಳನ್ನು ಮುಂದುವರೆಸಲು ಗುತ್ತಿಗೆದಾರರಿಗೆ ಪಾವತಿ ನೆಪ ಒಡ್ಡಿ, ಚುನಾವಣಾ ಕಾರ್ಯಕ್ಕೆ ಬಳಸಿಕೊಳ್ಳಲು ಅಡ್ಡದಾರಿಗಳಿಂದ ಹಣದ ವ್ಯವಸ್ಥೆ ಮಾಡಿಕೊಳ್ಳುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಲೋಕಸಭಾ ಚುನಾವಣೆ ಮುಗಿಯುವವರೆಗೆ ಬಿಡಿಎದಿಂದ ಯಾವುದೇ ರೀತಿಯ ಪಾವತಿಗಳು ಆಗದಂತೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿದ್ದೇವೆ ಎಂದು ವಿವರಿಸಿದರು. ನೀತಿಸಂಹಿತೆ ಮುಗಿಯುವವರೆಗೆ ಇಂಥ ದುಸ್ಸಾಹಸಕ್ಕೆ ಅವಕಾಶ ಕೊಡಬಾರದೆಂದು ಕೋರಿದ್ದೇವೆ ಎಂದರು.

ನಿನ್ನೆ ಬಿಜೆಪಿ ಸಂಸ್ಥಾಪನಾ ದಿನವನ್ನು ಆಚರಿಸಲಾಗಿದೆ. 1980ರ ಏಪ್ರಿಲ್ 6ರಂದು ನಮ್ಮ ಪಕ್ಷವನ್ನು ಸ್ಥಾಪಿಸಲಾಗಿತ್ತು. ಇದರ ಅಂಗವಾಗಿ ರಾಜ್ಯದೆಲ್ಲೆಡೆ ಎಲ್ಲ ಕಾರ್ಯಕರ್ತರ ಮನೆಗಳ ಮೇಲೆ ಅದರಲ್ಲೂ ವಿಶೇóಷವಾಗಿ ಎಲ್ಲ ಬೂತ್ ಅಧ್ಯಕ್ಷರ ಮನೆ ಮೇಲೆ ಬಿಜೆಪಿ ಧ್ವಜ ಹಾರಿಸಿದ್ದೇವೆ ಎಂದು ತಿಳಿಸಿದರು.

ತನಗೆ ಯಾವ ಪಕ್ಷದ ಮೇಲೆ ಗೌರವ, ವಿಶ್ವಾಸ ಇದೆಯೋ ಅಂಥವರು ತಮ್ಮ ಮನೆಯ ಮೇಲೆ ಧ್ವಜ ಹಾಕಲು ಮುಕ್ತ ಅನುಮತಿ ಇದೆ ಎಂದು ಚುನಾವಣಾ ಆಯೋಗವೇ ತಿಳಿಸಿದೆ. ನೀತಿ ಸಂಹಿತೆಗೆ ಅದಕ್ಕೂ ಸಂಬಂಧ ಇಲ್ಲ ಎಂದು ತಿಳಿಸಲಾಗಿದೆ. ಅದೇರೀತಿ ತಮ್ಮ ವಾಹನಗಳ ಮೇಲೆ ಧ್ವಜ ಹಾಕಲು ನಿಯಮ ಇದೆ ಎಂದು ವಿವರಿಸಿದರು. ಸ್ವಯಂ ಇಚ್ಛೆಯಿಂದ, ಸ್ವಯಂ ಸ್ಫೂರ್ತಿಯಿಂದ ಇದನ್ನು ಮಾಡಲು ತಿಳಿಸಲಾಗಿದೆ ಎಂದರು.

ರಾಜಾಜಿನಗರದಲ್ಲಿ ಅಟಲ್ ಬಿಹಾರಿ ವಾಜಪೇಯಿ ಒಳಾಂಗಣ ಕ್ರೀಡಾಂಗಣವಿದೆ. ಆ ಆವರಣದ ವಾಜಪೇಯಿಯವರ ಮುಖಕ್ಕೆ ಬಟ್ಟೆ ಸುತ್ತಿದ್ದರು. ಅದು ಖಾಸಗಿ ಜಾಗ. ಇದು ಅತ್ಯಂತ ಹಾಸ್ಯಾಸ್ಪದ ಕ್ರಮ ಎಂದು ಟೀಕಿಸಿದರು. ಆದರೆ, ರಾಜೀವ್ ಗಾಂಧಿ ಅಷ್ಟಪಥ ಕಾರಿಡಾರನ್ನು ಮುಚ್ಚಿರಲಿಲ್ಲ. ಸೆಂಟ್ರಲ್ ಟಾಕೀಸಿನ ರಾಜೀವ್ ಗಾಂಧಿ ಪ್ರತಿಮೆಗೆ ಬಟ್ಟೆ ಸುತ್ತುವುದಿಲ್ಲ. ಇಬ್ಬರೂ ಭಾರತರತ್ನ ಪುರಸ್ಕøತರು. ಒಂದು ಭಾರತರತ್ನ ಫೇವರಿಟ್, ಇನ್ನೊಂದು ಭಾರತ ರತ್ನ ಹಾಗಿಲ್ಲವೇಕೆ ಎಂದು ಚುನಾವಣಾ ಆಯೋಗಕ್ಕೆ ಕೇಳಿದ ಮೇಲೆ ಬಟ್ಟೆ ಸುತ್ತಿದ್ದನ್ನು ತೆಗೆದರು ಎಂದು ವಿವರಿಸಿದರು.

ಏ. 26ರಂದು ನಡೆಯುವ ಚುನಾವಣೆಗೆ ಸಂಬಂಧಿಸಿದ ಮೊದಲನೇ ಹಂತದಲ್ಲಿ ನಾಮಪತ್ರ ಸಲ್ಲಿಸಿದ ಅಭ್ಯರ್ಥಿಗಳ ಕಡೆಯಿಂದ ಪ್ರತಿ ಅಭ್ಯರ್ಥಿಯ ಒಟ್ಟು ಕ್ರಿಮಿನಲ್ ಕೇಸ್ ಎಂಬ ಮಾಹಿತಿ ಇದೆ. ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ಸಿನ ಅಭ್ಯರ್ಥಿಗಳ ವಿರುದ್ಧ 18, ಬಿಜೆಪಿ ವಿರುದ್ಧ 10 ಮತ್ತು ಜೆಡಿಎಸ್ ವಿರುದ್ಧ 5 ಕೇಸುಗಳಿವೆ ಎಂದು ವಿವರಿಸಿದರು.

ಬೆಂಗಳೂರಿಗೆ ನೀರಿನ ಸಮಸ್ಯೆ ಆಗುವ ಮುನ್ಸೂಚನೆ ಇದ್ದರೂ ಇಂಡಿ ಒಕ್ಕೂಟದ ಪಕ್ಷ ಎಂಬ ಕಾರಣಕ್ಕೆ ತಮಿಳುನಾಡಿಗೆ ಕಾವೇರಿ ನೀರು ಬಿಟ್ಟಿದ್ದಾರೆ. ಈಗ ಕಾವೇರಿ 5ನೇ ಹಂತದ ಯೋಜನೆ ಜಾರಿಯಲ್ಲಿದೆ. ಅದು ಕಳೆದ ವರ್ಷವೇ ಮುಗಿಯಬೇಕಿತ್ತು. ಸರಕಾರದ ಜವಾಬ್ದಾರಿಯುತ ಸಚಿವರು ಯೋಜನೆ ಪೂರ್ಣಗೊಳಿಸಲು ಕ್ರಮ ತೆಗೆದುಕೊಂಡಿಲ್ಲವೇಕೆ ಎಂದು ಅವರು ಪ್ರಶ್ನೆಯನ್ನು ಮುಂದಿಟ್ಟರು.

ಇದೇ ವೇಳೆ ಅವರು ಕಾನೂನು ವಿಭಾಗದ ಕೈಪಿಡಿಯನ್ನೂ ಬಿಡುಗಡೆ ಮಾಡಿದರು. ಈ ಕೈಪಿಡಿಯಲ್ಲಿ ಬರುವ ಚುನಾವಣೆಯಲ್ಲಿ ಬಿಜೆಪಿ ಕಾರ್ಯಕರ್ತರಿಗೆ ಚುನಾವಣಾ ನಿಯಮಗಳ ಬಗ್ಗೆ ಮತ್ತು ಚುನಾವಣಾ ಸಂಬಂಧಿತ ಕಾನೂನುಗಳನ್ನು ತಿಳಿಸಲಾಗಿದೆ. ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಇದರಲ್ಲಿ ಅಭಿಪ್ರಾಯ ಬರೆದಿದ್ದಾರೆ. ವಿಶ್ವದ ಅತ್ಯಂತ ದೊಡ್ಡ ಪಕ್ಷವಾದ ಬಿಜೆಪಿ ಕಾನೂನಿಗೆ ಅನುಗುಣವಾಗಿ ಸ್ಪರ್ಧೆ ಮಾಡಲಿದೆ. ಅದಕ್ಕಾಗಿ ಕಾನೂನಿನ ಅರಿವು ಮೂಡಿಸುವ ನಿಟ್ಟಿನಲ್ಲಿ ಈ ಕೈಪಿಡಿ ಹೊರತರಲಾಗಿದೆ ಎಂದು ತಿಳಿಸಿದ್ದಾರೆ ಎಂದರು.

ಕಾನೂನು ಪ್ರಕೋಷ್ಟದ ರಾಜ್ಯ ಸಂಚಾಲಕ ವಸಂತಕುಮಾರ್, ಚುನಾವಣಾ ನಿರ್ವಹಣಾ ಸಮಿತಿ ಪ್ರಮುಖ ದತ್ತಗುರು ಹೆಗಡೆ, ಕಾನೂನು ವಿಭಾಗದ ಪ್ರಮುಖ ವಿನೋದ್‍ಕುಮಾರ್, ಪ್ರಮುಖರು ಉಪಸ್ಥಿತರಿದ್ದರು.

Post a Comment

0Comments

Post a Comment (0)